Sunday, August 9, 2015

ಡಿಪ್ಲೊಮಾ ಪರೀಕ್ಷೆ ಅಕ್ರಮ - Disciplinary Action on Students Involved in Malpractice

ಬೆಂಗಳೂರು: ಏಪ್ರಿಲ್-ಮೇನಲ್ಲಿ ನಡೆದ ವಿವಿಧ ಡಿಪ್ಲೊಮಾ ಕೋರ್ಸ್​ಗಳ ಅಂತಿಮ ಪರೀಕ್ಷೆಯಲ್ಲಿ ಅಕ್ರಮ ಎಸಗಿದ 540 ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ತಜ್ಞರ ಸಮಿತಿ ತಾಂತ್ರಿಕ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ.

ಪರೀಕ್ಷೆ ಕೊಠಡಿಯೊಳಗೆ ನಕಲು ಅಥವಾ ಇನ್ಯಾವುದೋ ಅಕ್ರಮ ಎಸಗಿದ ವಿದ್ಯಾರ್ಥಿಯನ್ನು ಈಗಾಗಲೇ ನಿರಪರಾಧಿ ಎಂದು ಘೊಷಿಸಿದ್ದಲ್ಲಿ, ಆ ವಿದ್ಯಾರ್ಥಿಯನ್ನು ಮಾಲ್​ಪ್ರಾಕ್ಟೀಸ್(ಒಟ್ಟು ಅಕ್ರಮ) ಪ್ರಕರಣದ ದೋಷಾರೋಪದಿಂದ ಮುಕ್ತಗೊಳಿಸಿ, ಫಲಿತಾಂಶ ಪ್ರಕಟಿಸಲು ಸೂಚನೆ ನೀಡಿದೆ. ಈ ಪ್ರಕರಣದಡಿ 9 ವಿದ್ಯಾರ್ಥಿಗಳನ್ನು ಗುರುತಿಸಲಾಗಿತ್ತು.

ವಿದ್ಯಾರ್ಥಿಗೆ ಪರ್ಫಾರ್ವೆನ್ಸ್ ಆಫ್ ಸಬ್​ಜೆಕ್ಟ್ ಕ್ಯಾನ್ಸಲ್ಡ್ (ಪಿಎಸ್​ಸಿ) ಎಂದು ಶಿಕ್ಷೆ ವಿಧಿಸಿದ್ದಲ್ಲಿ, ಅಂಥ ವಿದ್ಯಾರ್ಥಿಗಳು ಮಾಲ್​ಪ್ರಾಕ್ಟೀಸ್ ಎಸಗಿದ ಪಠ್ಯ ವಿಷಯದ ಫಲಿತಾಂಶ ರದ್ದುಪಡಿಸಿ, ಉಳಿದ ವಿಷಯದ ಫಲಿತಾಂಶ ಪ್ರಕಟಿಸಲು ಸಮಿತಿ ಸೂಚನೆ ನೀಡಿದೆ. ಈ ಆರೋಪದಡಿ 276 ವಿದ್ಯಾರ್ಥಿಗಳು ಸೇರಿದ್ದಾರೆ. ಪರ್ಫಾರ್ವೆನ್ಸ್ ಆಫ್ ಎಕ್ಸಾಮ್ ಕ್ಯಾನ್ಸಲ್ಡ್ ಎಂದು ಶಿಕ್ಷೆ ವಿಧಿಸಿದ ವಿದ್ಯಾರ್ಥಿಗಳ ಎಲ್ಲ ವಿಷಯದ ಫಲಿತಾಂಶ ತಡೆಹಿಡಿಯಲು ಸಮಿತಿ ನಿರ್ದೇಶಿಸಿದೆ. ಈ ಆರೋಪದಲ್ಲಿ 240 ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ.

ಪರ್ಫಾರ್ವೆನ್ಸ್ ಆಫ್ ಎಕ್ಸಾಮ್ ಕ್ಯಾನ್ಸಲ್ಡ್ +1 ಎಂದು ಶಿಕ್ಷೆ ನೀಡಿದ್ದ ವಿದ್ಯಾರ್ಥಿಗಳ ಎಲ್ಲ ವಿಷಯದ ಫಲಿತಾಂಶವನ್ನು ರದ್ದು ಮಾಡಲಾಗಿದ್ದು, 2015ರ ಡಿಸೆಂಬರ್​ನಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಅವಕಾಶ ನೀಡದಂತೆ ಶಿಫಾರಸು ಮಾಡಿದೆ. ಇದರಲ್ಲಿ 13 ವಿದ್ಯಾರ್ಥಿಗಳು ಇದ್ದಾರೆ. ಪರ್ಫಾರ್ವೆನ್ಸ್ ಆಫ್ ಎಕ್ಸಾಮ್ ಕ್ಯಾನ್ಸಲ್ಡ್+2 ಶಿಕ್ಷೆಗೆ ಒಳಗಾಗಿರುವ ವಿದ್ಯಾರ್ಥಿಗಳು 2016ರ ಡಿಸೆಂಬರ್ ತನಕ ಪರೀಕ್ಷೆ ಬರೆಯುವಂತಿಲ್ಲ, ಫಲಿತಾಂಶ ಪ್ರಕಟಿಸುವಂತಿಲ್ಲ.

ಪರ್ಫಾರ್ವೆನ್ಸ್ ಆಫ್ ಎಕ್ಸಾಮ್ ಕ್ಯಾನ್ಸಲ್ಡ್ +3 ಶಿಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳು 2017ರ ಏಪ್ರಿಲ್-ಮೇ ತನಕ ಯಾವುದೇ ಪರೀಕ್ಷೆ ಬರೆಯುವಂತಿಲ್ಲ. ಹಾಗೆಯೇ ಪರ್ಫಾರ್ವೆನ್ಸ್ ಆಫ್ ಎಕ್ಸಾಮ್ ಕ್ಯಾನ್ಸಲ್ಡ್ +4 ಶಿಕ್ಷೆ ವಿಧಿಸಿರುವ ವಿದ್ಯಾರ್ಥಿಗಳನ್ನು 2017ರ ಡಿಸೆಂಬರ್ ತನಕ ಡಿಬಾರ್ ಮಾಡಲಾಗಿದೆ. ಈ ಆರೋಪದಡಿ ಇಬ್ಬರು ವಿದ್ಯಾರ್ಥಿಗಳಿದ್ದಾರೆ.

ಪರ್ಫಾರ್ವೆನ್ಸ್ ಆಫ್ ಎಕ್ಸಾಮ್ ಕ್ಯಾನ್ಸಲ್ಡ್ ಎಂಬ ಶಿಕ್ಷೆಗೆ ಒಳಗಾಗಿರುವ ವಿದ್ಯಾರ್ಥಿ 2,4, 6ನೇ ಸೆಮಿಸ್ಟರ್​ನ ಪೂರ್ಣ ಪರೀಕ್ಷೆಗೆ ಹಾಜರಾಗಿದ್ದಲ್ಲಿ, ಆ ವಿದ್ಯಾರ್ಥಿಗೆ 3, 5ನೇ ಸೆಮಿಸ್ಟರ್​ನಲ್ಲಿ ಪರೀಕ್ಷೆ ಬರೆಯಲು ಅರ್ಹತೆ ಇರುವುದಿಲ್ಲ. ನಿರಪರಾಧಿ ಹಾಗೂ ವಿದ್ಯಾರ್ಥಿಗೆ ಪರ್ಫಾರ್ವೆನ್ಸ್ ಆಫ್ ಸಬ್​ಜೆಕ್ಟ್ ಕ್ಯಾನ್ಸಲ್ಡ್ (ಪಿಎಸ್​ಸಿ) ಆಗಿರುವ ವಿದ್ಯಾರ್ಥಿ ಆಗಸ್ಟ್ 15ರೊಳಗೆ ಅಗತ್ಯ ದಂಡ ಶುಲ್ಕ ಪಾವತಿಸಿ, ಕಾಲೇಜು ಪ್ರಾಂಶುಪಾಲರಿಂದ ಅನುಮತಿ ಪಡೆದು, ಮುಂದಿನ ತರಗತಿಗೆ ಸೇರಿಕೊಳ್ಳಲು ಅವಕಾಶವಿದೆ ಎಂದು ಸಮಿತಿ ಶಿಫಾರಸಿನಲ್ಲಿ ಹೇಳಿದೆ.

***

ಶೀಘ್ರ ಕ್ರಮ

ಅಕ್ರಮ ಎಸಗಿದ್ದ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕಾಗಿ ವಿಷಯ ತಜ್ಞರ ಸಮಿತಿ ರಚಿಸಲಾಗಿತ್ತು. ಈಗ ಸಮಿತಿ ವರದಿ ಸಲ್ಲಿಸಿದೆ. ಸದ್ಯದಲ್ಲೇ ಇದನ್ನು ಕಾರ್ಯರೂಪಕ್ಕೆ ತರಲಿದ್ದೇವೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಕೃಪೆ: ವಿಜಯವಾಣಿ 

No comments:

Post a Comment